ಆಕಾಶ 1  

ಪಾಶ್ಚಾತ್ಯ ತತ್ತ್ವದಲ್ಲಿ ಭೌತವಸ್ತುವಿಗೆ ಆಶ್ರಯವಾದ ಅವಕಾಶ. ಈ ಭಾವನೆ ಗ್ರೀಕ್ ತತ್ತ್ವದಲ್ಲಿ ಸ್ಪಷ್ಟವಾಗಿ ಕಾಣಿಸಿಕೊಳ್ಳುವುದು ಪ್ಲೇಟೋನ ಸಂವಾದಗಳಲ್ಲಿ. ಆತ ಆಕಾಶವನ್ನು ಒಂದು ಸಂಪುಟವೆಂದು (ರಿಸೆಪ್ಟಕಲ್) ಕರೆದಿರುತ್ತಾನೆ. ಅದು ಅಮೂರ್ತವಾದದ್ದು, ಖಾಲಿಯಾದದ್ದು. ಅದನ್ನು ಶೂನ್ಯ (ವಾಯ್ಡ್) ಎಂದೂ ಕರೆದಿರುತ್ತಾನೆ. ಅವನ ತತ್ತ್ವದಲ್ಲಿ ಭಾವನೆಗಳೇ ನಿತ್ಯಸತ್ಯಗಳು. ಅವು ಆಕಾಶಕ್ಕೆ ಅತೀತವಾದುವು. ಆಕಾಶಕ್ಕೆ ಒಳಪಟ್ಟವು ಭೌತವಸ್ತುಗಳು ಮಾತ್ರವೇ. 
ಅರಿಸ್ಟಾಟಲ್ ಪ್ಲೇಟೋನ ಈ ಭಾವನೆಯನ್ನು ಅಂಗೀಕರಿಸಲಿಲ್ಲ. ಅವನ ಪ್ರಕಾರ ಆಕಾಶ ನಿರಾಕಾರವಾದ ಶೂನ್ಯವಲ್ಲ. ಅದು ಅನಂತವೂ ಅಲ್ಲ. ಅದು ಮಿತಿ ಉಳ್ಳದ್ದು, ಭೌತವಸ್ತುವನ್ನು ಬಿಟ್ಟು ಆಕಾಶವಿಲ್ಲ. ಆಕಾಶವನ್ನು ಬಿಟ್ಟು ಭೌತವಸ್ತುವೂ ಇಲ್ಲ. ಆಕಾಶವೆಂದರೆ ಭೌತವಸ್ತುವಿನ ಎಲ್ಲೆ ಆದ್ದರಿಂದ ಅದು ಮಿತಿಯುಳ್ಳದ್ದು. ಅನಂತವಾದುದಲ್ಲಿ ಆಕಾಶ ಎಷ್ಟೇ ವಿಸ್ತಾರವಾದದ್ದಾಗಲಿ ಅದಕ್ಕೆ ಮಿತಿ ಇದ್ದೇ ಇದೆ. ಆಕಾಶದಲ್ಲಿರುವ ವಸ್ತುಗಳಿಗೆ ಮಾತ್ರ ಚಲನೆ ಇದೆ. ಈಶ್ವರ ಅಚಲನಾದ್ದರಿಂದ ಅವನು ಆಕಾಶದಲ್ಲಿಲ್ಲ, ಅದರ ಮಿತಿಗೆ ಒಳಪಡುವುದಿಲ್ಲ. ಯೂರೋಪಿನ ಮಧ್ಯಯುಗದ ತಾತ್ತ್ವಿಕರು ಅರಿಸ್ಟಾಟಲನ ಭಾವನೆಗಳನ್ನೇ ಒಪ್ಪಿಕೊಂಡರು. ಅವರ ಅಭಿಪ್ರಾಯದಲ್ಲಿ ಆಕಾಶ ಕಾಲಗಳು ಕೇವಲ ಚಿಲ್ಲರೆ ವಿಷಯಗಳು. ಈಶ್ವರನೊಬ್ಬನನ್ನು ಬಿಟ್ಟು ಉಳಿದೆಲ್ಲ ವಿಚಾರಗಳಲ್ಲಿ ಅವರು ಉದಾಸೀನರು. 

ಆಕಾಶ ತತ್ತ್ವಕ್ಕೆ ಹೆಚ್ಚು ಪ್ರಾಶಸ್ತ್ಯ ಬಂದದ್ದು ಡೇಕಾರ್ಟ್‍ನ ಕಾಲದಲ್ಲಿ. ರೇಖಾ ಗಣಿತಕ್ಕೂ ಭೌತ ವಿಜ್ಞಾನಕ್ಕೂ ಆಕಾಶ ಅತ್ಯಗತ್ಯವಾದ್ದರಿಂದ, ಆ ಶಾಸ್ತ್ರಗಳಿಗೆ ಡೇಕಾರ್ಟ್ ವಿಶೇಷ ಮನ್ನಣೆ ಕೊಟ್ಟಿದ್ದನಾದ್ದರಿಂದ ಆಕಾಶ ತತ್ತ್ವಕ್ಕೆ ಆತ ತನ್ನ ತತ್ತ್ವದಲ್ಲಿ ಸ್ವತಂತ್ರ ಸ್ಥಾನಕೊಟ್ಟ. ಅವನ ಪ್ರಕಾರ ವಿಸ್ತರಣೆ (ಎಕ್ಸಟೆನ್‍ಷನ್) ಸ್ವತಂತ್ರವಾದ ಭೌತವಸ್ತುವಿನ ಗುಣ. ಆಲೋಚನೆ ಸ್ವತಂತ್ರವಾದ ಆತ್ಮದ ಗುಣ. ಆತ್ಮ ಮತ್ತು ಭೌತವಸ್ತು ಎರಡೂ ಸ್ವತಂತ್ರ ಮತ್ತು ಪರಸ್ಪರ ವಿರುದ್ಧ ಗುಣಗಳು. ಇದು ದ್ವೈತವಾದ.

ಸಿನೋಜó ಈ ದ್ವೈತವಾದವನ್ನು ಖಂಡಿಸಿ, ವಿಸ್ತಾರವೂ ಆಲೋಚನೆಯೂ ಭಿನ್ನ ದ್ರವ್ಯಗಳ ಗುಣಗಳಲ್ಲ, ಅವೆರಡು ಒಂದೇ ವಸ್ತುವಿನಲ್ಲಿ ಎಡೆಬಿಡದೆ ಇರುವ ಗುಣಗಳೆಂದು ಸ್ಥಾಪಿಸಿದ. ಈ ಮೂಲಕ ಆತ್ಮಕ್ಕೂ ವಸ್ತುವಿಗೂ ಮಧ್ಯೆ ಇದ್ದ ಕಂದಕವನ್ನು ತೊಡೆದು ಹಾಕಿದ.

ಪರಮ ಅನುಭವವಾದಿಯಾದ ಡೇವಿಡ್ ಹ್ಯೂಮ್, ಆಕಾಶವೆಂಬ ಭಾವನೆಗೆ ವಾಸ್ತವಾನುಭವದ ಆಧಾರವಿಲ್ಲವಾದುದ್ದರಿಂದ ಅದು ನಿಜವಲ್ಲ; ನಿಜವಾದ ಅನುಭವ ತೋರಿಸುವುದು ಇಲ್ಲಿರುವುದು, ಮೇಲಿರುವದು, ಎಡಕ್ಕಿರುವದು, ಬಲಕ್ಕಿರುವದು, ಎಂಬ ಪೃಥಕ್ಕಾದ ದಿಕ್ಕುಗಳನ್ನು ಮಾತ್ರವೇ; ಆದ್ದರಿಂದ ಅನಂತವಾದ ಆಕಾಶವೆಂಬುದು ಮಿಥ್ಯಾಭಾವನೆ ಎಂದು ವಾದಿಸಿದ. ಇಮ್ಯಾನ್ಯುಆಲ್ ಕ್ಯಾಂಟ್ ಮನಸ್ಸು ಕೇವಲ ನಿಶ್ಚೇತನವಾದುದೆಂಬ ಹ್ಯೂಮನ ಅಭಿಪ್ರಾಯವನ್ನು ಖಂಡಿಸಿ, ಆಕಾಶ ಕಾಲಗಳು ಮನಸ್ಸಿನ ಆಂತರಿಕಭಾವನೆಗಳೆಂದು ಆಂತರಿಕ ಭಾವನೆಗಳಿಗೆ ಒಳಪಡದ ಮನಸ್ಸು ಯಾವ ಇಂದ್ರಿಯಾಂಶವನ್ನೂ ಸ್ವೀಕರಿಸುವದಿಲ್ಲವೆಂದೂ ಆ ಭಾವನೆಗಳು ಭೌತವಸ್ತುವಿನ ಅರಿವಿಗೆ ಅತ್ಯಗತ್ಯ ಭಾವನೆಗಳೆಂದೂ ತನ್ನ ಮೊದಲ ಗ್ರಂಥದ ಮೊದಲ ಭಾಗವಾದ ಎಸ್ತಲಿಕ್‍ನಲ್ಲಿ ಪ್ರತಿಪಾದಿಸಿದ. ಆದರೆ ಈ ಭಾವನೆಯೇ ಹೊರತು, ಆ ಶಾಸ್ತ್ರಗಳ ಆಚಿನ ಅನುಭವಾತೀತ ಪ್ರಮೇಯಗಳಿಗೆ ಅನ್ವಯವಾಗದೆಂದೂ ಹಾಗೆ ಅತೀಂದ್ರಿಯ ವಸ್ತುಗಳಿಗೆ ಅದನ್ನು ಅನ್ವಯಿಸಿದರೆ ವಿರುದ್ಧಭಾವನೆಗಳಿಗೆ ಎಡೆಗೊಟ್ಟು ವಿಚಾರ ಅಸ್ತವ್ಯಸ್ತವಾಗುತ್ತದೆಯೆಂದೂ ಆ ಗ್ರಂಥದ ಮೂರನೆಯ ಭಾಗವಾದ ಡಯಲೆಕ್ಟಿನಲ್ಲಿ ಪ್ರತಿಪಾದಿಸಿದ.

ಕಾಲ ಆಕಾಶ ಭಾವನೆಗಳಿಗೆ ಹೆಚ್ಚು ಪ್ರಾಶಸ್ತ್ಯ ಬಂದದ್ದು ಇತ್ತೀಚಿನ ಕಾಲದಲ್ಲಿ, ಕಾಲಕ್ಕೆ ವಿಶೇಷ ಪ್ರಾಶಸ್ತ್ಯ ದೊರೆತದ್ದು ಬರ್ಗಸನ್ ತತ್ತ್ವದಲ್ಲಿ. ಕಾಲವೇ ಸತ್ತಿನ ಜೀವನಾಡಿ ಎಂದು ಆತ ಕ್ರಿಯೆಟಿವ್ ಇವೊಲ್ಯೂಷನ್ ಅಂಡ್ ಟೈಮ್ ಫ್ರೀ ವಿಲ್ ಎಂಬ ಗ್ರಂಥಗಳಲ್ಲಿ ಪ್ರತಿಪಾದಿಸಿದ. ಆದರೆ ಕಾಲತತ್ತ್ವಕ್ಕೆ ಕೊಟ್ಟ ಪ್ರಾಶಸ್ತ್ಯವನ್ನು ಆತ ಆಕಾಶತತ್ತ್ವಕ್ಕೆ ಕೊಡಲಿಲ್ಲ.

ಕಾಲ ಆಕಾಶಗಳೆರಡಕ್ಕೂ ಸಮಾನ ಪ್ರಾಶಸ್ತ್ಯ ದೊರೆತದ್ದು ತುಂಬ ಈಚಿನ ಕಾಲದಲ್ಲಿ. ಅದಕ್ಕೆ ಕಾರಣನಾದವ ಆಲ್ಬರ್ಟ್ ಐನ್‍ಸ್ಟೈನ್. ಅವನ ಪ್ರಕಾರ ಕಾಲ ಆಕಾಶಗಳು ಪರಸ್ಪರ ಸಾಪೇಕ್ಷವಾದುವು. ವಿಶ್ವದ ಎಲ್ಲ ಘಟನೆಗಳಿಗೂ ಸರಳ ಘಟನೆಗಳಲ್ಲಿ ಸಂಕೀರ್ಣ ಘಟನೆಗಳು. ಅವು ನಾಲ್ಕು ಪರಿಣಾಮಗಳುಳ್ಳ ಘಟನೆಗಳು. ಯಾವ ಒಂದು ಘಟನೆಯನ್ನು ತೆಗೆದುಕೊಂಡರೂ ಅದರಲ್ಲಿ ಆಕಾಶದ ಮೂರು ಪರಿಮಾಣಗಳೂ ಕಾಲದ ಒಂದು ಪರಿಮಾಣವೂ ಅವಿಭಾಜ್ಯವಾಗಿ ಇದ್ದೇ ಇರುತ್ತವೆ. ಹಿಂದಿನ ಕಾಲದಲ್ಲಿ ಕಾಲವನ್ನು ಬಿಟ್ಟು ಆಕಾಶವೆಂಬ ಒಂದು ಖಾಲಿಯಾದ ದ್ರವ್ಯವಿದೆಯೆಂದು ಆಕಾಶವನ್ನು ಬಿಟ್ಟು ಕಾಲ ಕೇವಲ ಭಿನ್ನಭಿನ್ನ ಲಕ್ಷಣಗಳ ಸಂತಾನವೆಂದೂ ಬಗೆದಿದ್ದರು. ಈ ಭಾವನೆಗಳು ತತ್ತ್ವಶಾಸ್ತ್ರದಲ್ಲಿ ದುಷ್ಪರಿಣಾಮಕಾರಿಯಾಗಿದ್ದುವು. ಆದರೂ ದುಷ್ಪರಿಣಾಮದಿಂದ ಪಾರಾಗುವಂತೆ ಆಕಾಶ ಕಾಲ ತತ್ತ್ವಗಳನ್ನು ತಾತ್ತ್ವಿಕರು ಯಾರೂ ನಿರೂಪಿಸಲು ಪ್ರಯತ್ನಿಸಲಿಲ್ಲ. ಆದರೆ ಅವು ಭೌತಶಾಸ್ತ್ರದ ಮುನ್ನಡೆಗೆ ತಡೆಗಳಾದಾಗ ಭೌತವಿಜ್ಞಾನಿಗಳು ತಾತ್ತ್ವಿಕರಂತೆ ಉದಾಸೀನರಾಗಿರಲಿಲ್ಲ. ಆಕಾಶ ಕಾಲ ಅವಿಭಾಜ್ಯವಾದುವು, ಒಂದಕ್ಕೊಂದು ಸಾಪೇಕ್ಷವಾದುವು ಎಂಬ ಹೊಸ ತತ್ತ್ವವನ್ನು ಕಂಡುಹಿಡಿದು ಆ ಮೂಲಕ ಭೌತಶಾಸ್ತ್ರದಲ್ಲಿ ಕ್ಲೇಶಗಳನ್ನು ಪರಿಹರಿಸಿ ಅದರ ಮುನ್ನಡೆಗೆ ಕಾರಣರಾದರು.

ಹೀಗೆ ಭೌತಶಾಸ್ತ್ರದಲ್ಲಿ ಆಕಾಶ ಕಾಲಗಳ ಭಾವನೆ ಬೆಳೆದಾಗ ಆ ಭಾವನೆ ತತ್ತ್ವ ಶಾಸ್ತ್ರಜ್ಞರನ್ನು ಎಚ್ಚರಗೊಳಿಸಿತು. ಆಕಾಶ ಕಾಲಗಳ ಸಾಪೇಕ್ಷ ಭಾವನೆಯನ್ನು ಎಸ್. ಅಲೆಕ್ಸಾಂಡರ್ ತನ್ನ ತತ್ತ್ವದ ಪ್ರಥಮ ತತ್ತ್ವವಾಗಿ ಮಾಡಿಕೊಂಡ ಅವನ ಗ್ರಂಥದ ಹೆಸರು ಸ್ಪೇಸ್ ಟೈಮ್ ಆಂಡ್ ಡೀಟಿ. ಅವನ ತರುವಾಯ ಎ.ಎನ್. ವೈಟೆಡ್ ದೇಶಕಾಲ ಸಾಪೇಕ್ಷತತ್ತ್ವವನ್ನು ವಿಶಾಲಗೊಳಿಸಿ ಆಕಾಶಕಾಲಗಳಲ್ಲದೆ ವಿಶ್ವದ ಎಲ್ಲವೂ ದೇಹ, ಮನಸ್ಸು, ವಿಶ್ವ ಮತ್ತು ಈಶ್ವರ ಎಲ್ಲವೂ ಸಾಪೇಕ್ಷವಾದುವೆಂದು, ಸಾಪೇಕ್ಷ ತತ್ತ್ವವನ್ನು ಪರತತ್ತ್ವದ ಮುಖ್ಯ ತತ್ತ್ವವನ್ನಾಗಿ ಮಾಡಿಕೊಂಡ.     							
(ಜಿ.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ